ಡೆರ್ಮೆಸ್ಟಿಡೀ -
ಕೋಲಿಯಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಇದಕ್ಕೆ ಸೇರಿದ ಕೀಟಗಳನ್ನು ಜಮಖಾನದ ಜೀರುಂಡೆಗಳು ಅಥವಾ ಚರ್ಮದ ಜೀರುಂಡೆಗಳು ಎಂಬ ಸಾಮಾನ್ಯ ಬಳಕೆಯ ಹೆಸರಿನಿಂದ ಕರೆಯಲಾಗುತ್ತದೆ. ಇವುಗಳಲ್ಲಿ ಹೆಚ್ಚಿನವು ತುಂಬ ವಿನಾಶಕಾರಿ ಕೀಟಗಳೆಂದು ಹೆಸರಾಗಿವೆ. ಜಮಖಾನೆ, ಚರ್ಮ, ಗರಿ, ಕೊಂಬು, ಕೂದಲು, ತುಪ್ಪುಳು, ರೇಷ್ಮೆ, ಉಣ್ಣೆ ಮುಂತಾದವುಗಳಿಂದ ತಯಾರಾದ ವಸ್ತುಗಳನ್ನೂ ಸಂಗ್ರಹಾಲಯಗಳಲ್ಲಿ ಇಟ್ಟ ಒಣಕೀಟ ಮೊದಲಾದವನ್ನೂ ಸಂಗ್ರಹಿಸಿಟ್ಟ ಧಾನ್ಯಗಳನ್ನೂ ತಿಂದು ಬದುಕುತ್ತವೆ. ಪ್ರೌಢಕೀಟಗಳು ಸಣ್ಣಗಾತ್ರದವು; 2-10 ಮಿ.ಮೀ. ಉದ್ದ ಬೆಳೆಯುತ್ತವೆ. ದೇಹದ ಆಕಾರ ಅಂಡದಂತೆ, ಬೆನ್ನು ಉಬ್ಬಿಕೊಂಡಿದೆ. ಬಣ್ಣ ಕಪ್ಪು ಇಲ್ಲವೆ ಮಾಸಲು. ಎಲಿಟ್ರದ ಮೇಲೆ ಸೂಕ್ಷ್ಮ ಕೂದಲು ಇಲ್ಲವೆ ಶಲ್ಕಗಳಿವೆ. ಕುಡಿಮೀಸೆಗಳು ಹಳದಿ. ಕೆಲವು ಬಗೆಗಳಲ್ಲಿ ಬಣ್ಣಬಣ್ಣದ ಗುರುತುಗಳಿರುವುದೂ ಉಂಟು. ಸ್ಪರ್ಶಾಂಗಗಳು ಗದೆಯಾಕಾರದವು. ಮೊಟ್ಟೆಗಳು ಬಿಳಿ ಬಣ್ಣದವು. ಡಿಂಬಗಳು ಕಂದು ಅಥವಾ ಕಪ್ಪುಬಣ್ಣದವು. ಇವುಗಳ ಮೈಮೇಲೆ ಉದ್ದುದ್ದನೆಯ ಕೂದಲುಗಳಿವೆ. ಇವು ಕೂಡ ವಯಸ್ಕ ಜೀರುಂಡೆ ತಿನ್ನುವ ಆಹಾರವನ್ನೇ ತಿನ್ನುತ್ತವೆ. ಆ ವಸ್ತುಗಳನ್ನು ಹಾಳುಮಾಡುವುದರಲ್ಲಿ ಡಿಂಬಗಳೇ ಪ್ರಮುಖ.

	ಡೆರ್ಮೆಸ್ಟಿಡೀ ಕುಟುಂಬದ ಜೀರುಂಡೆಗಳಲ್ಲಿ ಮುಖ್ಯವಾದವು ಆಂತ್ರೇನಸ್ ವೊರ್ಯಾಕ್ಸ್ ಮತ್ತು ಆ. ಪಿಂಪಿನೆಲ್ಲ. ಇವು ದಕ್ಷಿಣ ಭಾರತದಲ್ಲಿ ಬಲು ಸಾಮಾನ್ಯ. ಆ. ಫೇಸಿಯೇಟಸ್, ಸೈನ್ಯದ ಬಟ್ಟೆ ಗಡಂಗುಗಳಲ್ಲಿರುತ್ತದೆ. ಇನ್ನೊಂದು ದಪ್ಪ, ಕಪ್ಪುಬಣ್ಣದ ಡೆರ್ಮೆಸ್ಟಿಸ್ ವಲ್ಟೈನಸ್ ಎಂಬುದು ಮೀನು ಗೊಬ್ಬರ, ರೇಷ್ಮೆ ಗೂಡು ಇತ್ಯಾದಿಗಳಿಗೆ ಆಗಾಗ ಬೀಳುತ್ತದೆ. ಜಮಖಾನದ ಜೀರುಂಡೆಗಳಾದ ಆಂತ್ರೇನಸ್ ಮತ್ತು ಅಟ್ಟಜೀನಸ್ ಜಾತಿಗಳು, ಚರ್ಮಕ್ಕೆ ಬೀಳುವ ಡೆರ್ಮೆಸ್ಟಿಸ್ ಲಾರ್ಡೇಯಸ್ ಮತ್ತು ಸಂಗ್ರಹಿಸಿದ ಧಾನ್ಯ ಮತ್ತು ಪ್ರಾಣಿಜನ್ಯವಸ್ತುಗಳ ಶತ್ರು ಟ್ರೋಗೊಡೆರ್ಮ ಗ್ರನೇರಿಯ ಎಂಬವು ಮುಖ್ಯಪೀಡೆಗಳು. ಜೀರುಂಡೆಗಳು ಸೇರದಂತೆ ಅವುಗಳ ಆಹಾರವಸ್ತುಗಳಿದ್ದ ಕಡೆ ಬಿರುಕು, ಸಂದುಗಳಿರದಂತೆ ನೋಡಿಕೊಂಡು ಆಹಾರವಸ್ತುಗಳನ್ನು ಆಗಾಗ ಪರೀಕ್ಷಿಸಿ, ಬಿಸಿಲಿನಲ್ಲಿಟ್ಟು ಶುಚಿಗೊಳಿಸುವುದರಿಂದ, ಜಮಖಾನ, ಬಟ್ಟೆಗಳ ಪದರಗಳಲ್ಲಿ ಕರ್ಪೂರ ನ್ಯಾಫ್ತಲಿನ್ ಅಥವಾ ಪ್ಯಾರಡೈಕ್ಲೋರೋಬೆನ್‍ಜಿûನ್ ಹರಳನ್ನು ಉದುರಿಸಿಡುವುದರಿಂದ ಈ ಕೀಟಗಳನ್ನು ಹತೋಟಿಯಲ್ಲಿಡಬಹುದು. ಹೈಡ್ರೊಜನ್ ಸೈಯನೈಡ್ ಅಥವಾ ಕಾರ್ಬನ್ ಬೈಸಲ್ಫೈಡ್‍ಗಳ ಧೂಪವನ್ನು ಹಾಕುವುದರಿಂದಲೂ ಇವನ್ನು ನಿಯಂತ್ರಿಸಬಹುದು.
(ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ